2:07 PM Saturday6 - March 2021
ಬ್ರೇಕಿಂಗ್ ನ್ಯೂಸ್
ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ! ಸೆಕ್ಸ್ ಸಿಡಿ ಬಳಿಕ ಸಂಕಟದಲ್ಲಿ ಸಾಲು ಸಾಲು ಸಚಿವರು: ಮಾನಹಾನಿ ವರದಿ ತಡೆಯುವಂತೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಡಾ. ಎಂ. ಮೋಹನ್ ಆಳ್ವರಿಗೆ ಕವಿ, ಸಜ್ಜನ ರಾಜಕಾರಣಿ ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ  ಶ್ಲಾಘ್ಯದಲ್ಲಿ 10ನೇ ತರಗತಿ ಸಿಬಿಎಸ್ ಇ ಗಣಿತ, ವಿಜ್ಞಾನ ಟ್ಯೂಶನ್ ತರಗತಿಗೆ ಪ್ರವೇಶ… ಮಂಗಳೂರಿನಲ್ಲಿ ಹಸುಗೂಸುಗಳ ಬೃಹತ್ ಮಾರಾಟ ಜಾಲ ಪತ್ತೆ: ಗಂಡು ಮಗುವಿಗೆ 6 ಲಕ್ಷ,… ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಾಲಿಕೆಗೆ ದೂರು ರವಾನೆಗೆ ಬರೋಬ್ಬರಿ 8…

ಇತ್ತೀಚಿನ ಸುದ್ದಿ

ಜಾನಕಿ ನಿವಾಸ

July 16, 2020, 5:05 PM

  • ಅಶೋಕ್ ಕಲ್ಲಡ್ಕ 

ಇಡೀ ಮನೆಯೇ ಘೋರ ಮೌನದಿಂದ ತುಂಬಿತ್ತು. ಭಯದ ಪರಿವೇ ಇಲ್ಲದೆ ಇಲಿಗಳು ಹಗಲು ಹೊತ್ತಿನಲ್ಲೇ ಯದ್ವಾತದ್ವಾ ಓಡಾಡುತ್ತಿದ್ದವು. ಶರಶಯ್ಯೆಯಲ್ಲಿ ಮಲಗಿದ ಭೀಷ್ಮನ ತರಹ ಬಿಳಿಗಡ್ಡಧಾರಿ, ಕೆದರಿದ ಕೂದಲಿನ, ಸುಕ್ಕುಗಟ್ಟಿದ ಮುಖದ ವಿಶ್ವ ಮಾವ ಜೋಡಿ ಬೆಂಚಿನ ಮೇಲೆ ಮಲಗಿದ್ದ. ಇಡೀ ಮನೆ ಜೇಡರ ಬಲೆಯಿಂದ ತುಂಬಿತ್ತು…

ಮಾವನ ಯೋಗಕ್ಷೇಮ ವಿಚಾರಿಸಿದೆ. ಮೊದಲು ಭಯಪಟ್ಟರೂ ನಂತರ ನನ್ನ ಮೂರು ವರ್ಷದ ಮಗಳು ಸಿಂಧು ಅಜ್ಜನ ತೊಡೆಯೇರಿ ಆತನ ಬಿಳಿ ಗಡ್ಡದ ಜತೆಗೆ ಆಟವಾಡುತ್ತಾ, ತೊದಲು ನುಡಿಗಳಲ್ಲಿ ಅಜ್ಜನ ಜತೆಗೆ ಮಾತಿಗೆ ಶುರು ಮಾಡಿದಳು.

ಅಡುಗೆ ಮನೆಯಲ್ಲಿ ಪಾತ್ರೆಗಳೆಲ್ಲ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಕೆಲಸದಾಳು ಕಮಲಿ ಮಾಡಿಟ್ಟು ಹೋದ ಗಂಜಿ ತಣ್ಣಗಾಗಿ ನೊಣಗಳ ಹಿಂಡನ್ನೇ ಆಹ್ವಾನಿಸುವಂತಿತ್ತು. ಹೂಜಿಯಲ್ಲಿದ್ದ ತಣ್ಣೀರನ್ನು ಗಂಟಲಿಗೆ ಸುರಿದುಕೊಂಡು ನಡುಮನೆಯಲ್ಲಿ ಪ್ರವೇಶಿಸಿದೆ.

ಶ್ರೀಗಂಧದ ಹಾರದಿಂದ ಶೃಂಗರಿಸಲ್ಪಟ್ಟ ಧೂಳಿನಿಂದ ತುಂಬಿದ ಅತ್ತೆಯ ಫೋಟೋ ಕಣ್ಣಿಗೆ ಬಿತ್ತು. ಬಲಗಡೆಯ ಕೊಣೆಯತ್ತ ತೆರಳಿದೆ. ಕೋಣೆಯ ಬಾಗಿಲು ಎಳೆದಿತ್ತು. ಮೆಲ್ಲಗೆ ಬಾಗಿಲು ದೂಡಿದೆ. ದಢಾರ್ ಎಂದು ಸದ್ದು ಮಾಡುತ್ತಾ ಬಾಗಿಲು ತೆರೆದುಕೊಂಡಿತು. ಹಾಗೆ ಒಳಗೆ ನುಗ್ಗಿದೆ. ಜೇಡರ ಬಲೆ ಮುಖಕ್ಕೆ ದಪ್ಪಗೆ ಅಂಟಿಕೊಂಡಿತು. ಎಡಗೈಯಿಂದ ಮುಖ ಉಜ್ಜುತ್ತಾ ಬಲಗೈಯಿಂದ ಕಿಟಕಿ ಬಾಗಿಲು ತೆರೆದೆ. ಬಾಗಿಲ ಸಂದಿನಿಂದ ಲಕ್ಷ್ಮೀ ಚೇಳು ಓಡುವುದು ಕಾಣಿಸಿತು. ಕೊಠಡಿ ಪೂರ್ತಿ ಧೂಳಿನಿಂದ ತುಂಬಿ ಗಬ್ಬು ವಾಸನೆ ಬರುತ್ತಿತ್ತು.

ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸಿದರೆ ಕಟ್ಟಿರುವೆಗಳ ದಿಬ್ಬಣವೇ ಸಾಗುತ್ತಿತ್ತು. ಕೋಣೆಯ ಬದಿಯಲ್ಲಿ ಒಂದು ಹಳೆಯ ಮಂಚ ಕಣ್ಣಿಗೆ ಕಾಣಿಸಿತು. ಅಂತಿಂಥ ಮಂಚವಲ್ಲ, ನಾಲ್ಕು ಕಂಬ, ಸೂರು ಇದೆ. ಸೊಳ್ಳೆ ಪರದೆ ಹರಿದು ಹೋಗಿತ್ತು. ನಾವು ಸಣ್ಣವರಿರುವಾಗ ಇದೇ ಮಂಚದಲ್ಲಿ ಬಸ್ ಆಟವಾಡುತ್ತಿದ್ದೆವು. ಅಜ್ಜಿ ನೆನಪಿಗೆ ಬಂದಳು. ಹದಿನೈದು ವರ್ಷಗಳ ಹಿಂದೆ ಆಕೆ ಹೇಳಿದ ಅವಳ ಗೋಳಿನ ಕಥೆ ಕಿವಿಯಲ್ಲಿ ಗುಯ್ ಗುಡಲಾರಂಭಿಸಿತು.

___________________________

ಹಸುರಿನಿಂದ ಕಂಗೊಳಿಸುವ ಸುಂದರ ಹಳ್ಳಿ ತಾವರೆಕೊಳ. ಒಂದು ಬದಿಯಲ್ಲಿ ಬೆಟ್ಟ- ಗುಡ್ಡ, ಮರ, ಗಿಡಗಳು. ವಿಶಾಲವಾದ ಬಯಲು ಗದ್ದೆಗೆ ತಾಗಿಕೊಂಡಿರುವ ಸುಂದರ ಕೊಳ. ಸ್ಫಟಿಕದಂತಹ ನೀರಿನಿಂದ ಕೂಡಿದ ಆ ಕೆರೆ ತುಂಬಾ ತಾವರೆ. ಹಳ್ಳಿಯ ಮಧ್ಯೆದಲ್ಲಿ ಹಾದು ಹೋಗುವ ಕಿರಿದಾದ ಮಣ್ಣಿನ ರಸ್ತೆ. ರಸ್ತೆಗೆ ಅಂಟಿಕೊಂಡಿರುವ ಒಂದು ಹಳೆಯ ಮಾದರಿಯ ದೊಡ್ಡ ಮಾಳಿಗೆ ಮನೆ. ಮನೆ ಸುತ್ತ ತಲೆ ಎತ್ತಿ ನಿಂತಿರುವ ತೆಂಗು, ಮಾವು, ಚಿಕ್ಕು, ಹಲಸಿನ ಮರಗಳು. ಮನೆಯ ಮುಂದೆ ಓಬೀರಾಯನ ಕಾಲದ ಹಳೆಯ ಗಟ್ಟಿಮುಟ್ಟಾದ ಮರದ ಕಪ್ಪು ಬಣ್ಣದ ದೊಡ್ಡ ಗೇಟು. ಗೇಟು ತೆರೆದು ಕೆಲವು ಹೆಜ್ಜೆಗಳನ್ನಿಟ್ಟರೆ ಮನೆಯ ಮುಂದಿನ ಪೋರ್ಟಿಕೊದಲ್ಲಿ ಬಂದು ಸೇರುತ್ತದೆ.

ಪೊರ್ಟಿಕೊದ ಒಂದು ಬದಿಯಲ್ಲಿ ಹಾಸಿರುವ ರತ್ನಗಂಬಳಿ ಅ ಮನೆಯ ಶ್ರೀಮಂತಿಕೆಯ ಸಂಕೇತ. ಹಾಸಿದ ರತ್ನಗಂಬಳಿ ಮೇಲೆ ತಾವರೆಕೊಳದ ಪಟೇಲರು ಇತರ ಐದು ಮಂದಿ ಗಣ್ಯರ ಜತೆಗೆ ಕುಳಿತಿದ್ದರು. ಎದುರುಗಡೆಯಲ್ಲಿ ಜಾನಕಿಯಮ್ಮ ಕಿರಿಯ ಮಗ ಪ್ರಸಾದ್ ಹಾಗೂ ಮೊಮ್ಮಕ್ಕಳಾದ ಕೇಶವ ಮತ್ತು ವನಜಾ ಜತೆ ತಲೆ ತಗ್ಗಿಸಿ ನಿಂತಿದ್ದರು. ಹೊರಗಡೆ ಸೇರಿದ ಹತ್ತಾರು ಮಂದಿ ಮುಂದೇನು…? ಎಂಬಂತೆ ಡೊಳ್ಳು ಹೊಟ್ಟೆಯ ಕುಳ್ಳಗಿನ ಪಟೇಲ ಗುಣಪಾಲರತ್ತ ಪ್ರಶ್ನಾರ್ಥಕ ನೋಟ ಬೀರುತ್ತಿದ್ದರು.

___________________________

ಐವತ್ತರ ಹರೆಯದಲ್ಲಿ ಚಿಗರೆಯಂತೆ ಓಡಾಡುತ್ತಿದ್ದ ಜಾನಕಿಯಮ್ಮ ಬೆದರಿದ ಹರಿಣಿಯಂತಾಗಿದ್ದರು. ಕರಗಿದ ಮೇಣದಂತೆ ಬಸವಳಿದ ಅವರ ಮುಖದ ಮೇಲಿನ ಒಂದೊಂದು ಗೆರೆಗಳು ಕೂಡ ಅವರ ಚಿಂತೆಯನ್ನು ಸಾರಿ ಸಾರಿ ಹೇಳುವಂತೆ ಎದ್ದು ಕಾಣುತ್ತಿತ್ತು. ತಲೆ ಮೇಲಿನ ಒಂದೊಂದು ಬಿಳಿ ಕೂದಲು ಅವರ ಕಷ್ಟವನ್ನು ಸಾರುತ್ತಿತ್ತು. ಒಂದು ಕಾಲದಲ್ಲಿ ಮಹಾರಾಣಿಯಂತೆ ಮೆರೆದಿದ್ದ ಆ ವಾತ್ಸಲ್ಯ ಮೂರ್ತಿ ಇಂದು ಸಂಪೂರ್ಣ ಕರಗಿ ಹೋಗಿದ್ದರು.

ಹೊರಗಡೆ ನೇಸರನ ಪ್ರಭಾವ ಜಾಸ್ತಿಯಾಗಿತ್ತು. ಕಾರ್ಖಾನೆಯಿಂದ ಹೊರಟ ಹೊಗೆಯಂತೆ ಹೊರಗಡೆ ಸೇರಿದ ಗಂಡಸರು ಸೇದಿ ಬಿಟ್ಟ ಬೀಡಿಯ ಹೊಗೆ ಆಕಾಶದತ್ತ ಏಳುತ್ತಿತ್ತು. ಹೆಂಗಸರಲ್ಲಿ ಕೆಲವರು ನಶ್ಯ ಮೂಗಿಗೇರಿಸುತ್ತಿದ್ದರು. ಇನ್ನೂ ಕೆಲವರು ಎಲೆಯಡಿಗೆ ಜಗಿದು ಪಚಕ್ಕನೆ ಉಗುಳುತ್ತಿದ್ದರು.

‘ ಎಂಥ ಅವಸ್ಥೆ ಗಿರಿಜಮ್ಮನವರೇ, ದೊಡ್ಡವರ ಮನೆಯಲ್ಲಿ ಹಿಂಗೆಲ್ಲ ನಡೆದರೆ, ನಮ್ಮಂತವರ ಪಾಡೇನು …?’ ಹೆಂಗಸೊಬ್ಬರು ನಶ್ಯವನ್ನು ಮೂಗಿಗೇರಿಸುತ್ತಾ ಪ್ರಶ್ನಿಸಿದರು. ಪಿಚಕ್ಕನೆ ಎಲೆಯಡಿಕೆ ನೀರು ಉಗುಳಿದ ಹೆಂಗಸೊಬ್ಬರು ‘ ಎಲ್ಲರ ಮನೆ ದೋಸೆ ತೂತೇ. ಆದರೆ ಇಲ್ಲಿ ಬಾಣಲೆಯೇ ತೂತಾಗಿದೆ’ ಎಂದಳು.

ಮನೆಯಂಗಳದಲ್ಲಿ ಹೆಂಗಸರ ಮಧ್ಯೆ ನಡೆಯುತ್ತಿದ್ದ ಸಂಭಾಷಣೆ ಸಾತ್ವಿಕ ಸ್ವಭಾವದ ಜಾನಕಿಯಮ್ಮನ ಕಿವಿಗೆ ಕಾದ ಸೀಸದಂತೆ ಚುಚ್ಚುತ್ತಿತ್ತು. ಸೂರಿನತ್ತ ದೃಷ್ಟಿಹರಿಸಿದ ಜಾನಕಿಯಮ್ಮ ಅವರ ಸ್ಮೃತಿಪಟಲದಲ್ಲಿ ಗತವೈಭವದ ಚಿತ್ರಗಳು ಮೂಡಲಾರಂಭಿಸಿತು.

___________________________

ಶಿವಪುರದ ಗೋವಿಂದ ಮೇಸ್ಟ್ರ ಏಕೈಕ ಮುದ್ದಿನ ಮಗಳು ಜಾನಕಿ. ಹದಿನೈದನೇ ವಯಸ್ಸಿನಲ್ಲಿ ಜಾನಕಿ ಅವರು ಅನಂದರಾಯರ ಪತ್ನಿಯಾಗಿ ತಾವರೆಕೊಳ ಸೇರಿದ್ದರು. ಪತ್ನಿಯ ಕಾಲಗುಣ ಎನ್ನುವಂತೆ ಜಾನಕಿ ಮನೆ ಸೇರಿದ ಬಳಿಕ ವೈದ್ಯರಾದ ಆನಂದರಾಯರ ಶ್ರೀಮಂತಿಕೆ ಇಮ್ಮಡಿಯಾಯಿತು. ಸೌಮ್ಯ ಸ್ವಭಾವದ, ನ್ಯಾಯಪರ ಆನಂದರಾಯರು ಆ ಹಳ್ಳಿ ತುಂಬಾ ರಾಯರೆಂದೇ ಪ್ರಸಿದ್ಧರು. ಹಳ್ಳಿಯ ಜನರು ತಮ್ಮ ವ್ಯಾಜ್ಯಗಳ ಪರಿಹಾರಕ್ಕೆ ಆನಂದರಾಯರ ಬಳಿ ಬರುತ್ತಿದ್ದರು. ಬಡ ರೋಗಿಗಳಿಗೆ ಧರ್ಮಾರ್ಥ ಔಪಧ ನೀಡುತ್ತಿದ್ದರು. ಪತ್ನಿ ಜಾನಕಿಯಮ್ಮ ಬಡ ಮಕ್ಕಳಿಗೆ ಊಟ, ಬಟ್ಟೆ ಕೊಟ್ಟು ಶಾಲೆಗೆ ಕಳುಹಿಸುತ್ತಿದ್ದರು. ಈ ಕಾರಣದಿಂದಲೇ ಆನಂದರಾಯರ ಹಾಗೂ ಪಟೇಲ ಗುಣಪಾಲರ ಅವರ ಸಂಬಂಧ ಅಷ್ಟಕ್ಕಷ್ಟೇ.

ಮುಂಜಾನೆ ಹಕ್ಕುಗಳ ಕಲರವ ಜತೆಗೆ ಆನಂದರಾಯರ ದಿನಚರಿ ಆರಂಭವಾಗುತ್ತಿತ್ತು. ಬೆಳಗ್ಗೆ ಎಂಟರಿಂದ ಹತ್ತರ ವರೆಗೆ ರಾಯರ ಮನೆ ಔಷಧಾಲಯದ ಜತೆ ಮಿನಿ ನ್ಯಾಯಾಲಯವೇ ಆಗುತ್ತಿತ್ತು. ಎಷ್ಟೋ ಒಡೆದು ಹೋಗುವ ಮನೆಗಳನ್ನು ಬೆಸೆಯುವಲ್ಲಿ ರಾಯರು ಯಶಸ್ವಿಯಾಗಿದ್ದರು. ಕುಂದಿದ ಮುಖ ಹೊತ್ತು ಅವರಲ್ಲಿಗೆ ಬಂದವರು ನಗು ಮೊಗದಿಂದ ಹಿಂತಿರುಗುತ್ತಿದ್ದರು. ಬಡ ಮಕ್ಕಳನ್ನು ಶಾಲೆಗೆ ಕಳುಹಿಸುವ ಜವಾಬ್ದಾರಿಯನ್ನು ಜಾನಕಿಯಮ್ಮ ನೋಡಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ತಾವರೆಕೊಳದಲ್ಲಿ ಅನಕ್ಷರಸ್ಥರ ಸಂಖ್ಯೆ ಕಡಿಮೆ.

___________________________

ಎರಡು ವರ್ಷಗಳು ಉರುಳಿದವು. ಆನಂದರಾಯ ದಂಪತಿಗೆ ಜ್ಯೇಷ್ಠ ಪುತ್ರ ವಿಶ್ವನಾಥನ ಆಗನವಾಯಿತು. ಒಂದು ವರ್ಷದ ಬಳಿಕ ಪ್ರಸಾದ ಹುಟ್ಟಿದ. ನಂತರ ಮೂರು ಹೆಣ್ಣು ಮಕ್ಕಳು. ತುಂಬಿದ ಸಂಸಾರ. ವಿಶ್ವ ಮತ್ತು ಪ್ರಸಾದ್ ಅವಳಿ ಮಕ್ಕಳ ತರಹ ಬೆಳೆಯಲಾರಂಭಿಸಿದರು. ಮಕ್ಕಳ ಕಿಲಕಿಲ ನಗು ಆ ಮನೆ ತುಂಬಿ ಮಾರ್ದನಿಸಲಾರಂಭಿಸಿತು.

___________________________

ದಿನಗಳು ಸರಿದವು, ತಿಂಗಳುಗಳು ಕಳೆದವು, ವರ್ಷಗಳು ಉರುಳಿದವು ಮೆಟ್ರಿಕ್ಯುಲೇಶನ್ ಪಾಸ್ ಮಾಡಿದ ವಿಶ್ವ ಟೀಚರ್ ಟ್ರೇನಿಂಗ್ ಮಾಡಿ ಪಕ್ಕದ ಹಳ್ಳಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಆದ. ಬೆಳೆದು ನಿಂತ ಮಗನಿಗೆ ಮದುವೆ ಮಾಡಲು ಆನಂದರಾಯರು ನಿಶ್ಚಯಿಸಿದರು. ಗಂಡನ ಮಾತಿಗೆ ಜಾನಕಿಯಮ್ಮ ಒಪ್ಪಿಗೆ ಸೂಚಿಸಿದರು. ದೂರದ ಸಂಬಂಧಿಗಳ ಮಗಳಾದ ಇಂದಿರಾಳನ್ನು ಸೊಸೆಯಾಗಿ ತರಲು ನಿಶ್ಚಯಿಸಿದರು.

ಸೊಸೆ ಹೊಸಿಲು ದಾಟಿ ಮೂರು ತಿಂಗಳು ಕಳೆಯುವುದರೊಳಗೆ ಇಡೀ ಮನೆಯ ವಾತಾವರಣವೇ ಬದಲಾಯಿತು. ಅತ್ತೆಯ ಸ್ವಾದ್ವಿ ಸ್ವಭಾವಕ್ಕೆ ಸೊಸೆ ತೀರಾ ವಿರುದ್ದವಾಗಿದ್ದಳು. ಕಡ್ಡಿಯಂತಹ ಸಮಸ್ಯೆಯನ್ನು ಗುಡ್ಡ ಮಾಡುವುದರಲ್ಲಿ ಇಂದಿರಾ ನಿಸ್ಸೀಮಳು.

ಪೂರ್ವ ದಿಗಂತ ರಂಗೇರಿತ್ತು. ನೇಸರನ ಹೊಂಗಿರಣಗಳು ಕಿಟಕಿಯಿಂದ ತೂರಿ ಒಳಗಡೆ ಬೀಳುತ್ತಿತ್ತು. ದೇವರಿಗೆ ಆರತಿ ಎತ್ತುತ್ತಿದ್ದ ರಾಯರ ಎದೆಯಲ್ಲಿ ಇದ್ದಕ್ಕಿದ್ದ ಹಾಗೆ ನೋವು ಕಾಣಿಸಿಕೊಂಡಿತು. ಚಿಟ್ಟನೆ ಚೀರಿದ ರಾಯರು ಅಲ್ಲೇ ಕುಸಿದು ಬಿದ್ದರು. ಜಾನಕಿಯಮ್ಮನ ತೊಡೆ ಮೇಲೆ ತಲೆಯಿಟ್ಟ ರಾಯರ ಮುಖ ಕಪ್ಪಿಟ್ಟಿತು. ಹಣೆಯಲ್ಲಿ ಬೆವರಿನ ಸಾಲುಗಳು ಹೊಳೆಯಲಾರಂಭಿಸಿತು. ನೋಡು ನೋಡುತ್ತಿದ್ದಂತೆ ಕಣ್ಣ ರೆಪ್ಪೆಗಳು ಒಂದನ್ನೊಂದು ಬೆಸೆದುಕೊಂಡವು. ಜಾನಕಿಯಮ್ಮ ಎಷ್ಟೇ ಬೊಬ್ಬೆ ಹೊಡೆದರೂ ಮುಚ್ಚಿದ ರಾಯರ ಕಣ್ಣುಗಳು ಮತ್ತೆ ತೆರೆಯಲೇ ಇಲ್ಲ.

___________________________

ಚಿಗರೆಯಂತೆ ಓಡುತ್ತಿದ್ದ ದಿನಗಳು ಜಾನಕಿಯಮ್ಮನ ಪಾಲಿಕೆ ಆಮೆಯಂತೆ ತೆವಳಲಾರಂಭಿಸಿತು. ಗಂಡನಿಲ್ಲದ ಬಾಳು ದೊಡ್ಡ ಶೂನ್ಯವಾಗಿ ಕಂಡಿತು. ಇಂದಿರಾಳ ಜಗಳಗಂಟಿತನ ಶಾಂತವಾಗಿದ್ದ ನೀರಿನ ಮೇಲೆ ಬಿದ್ದ ಕಲ್ಲಿನಿಂದ ಎದ್ದ ತರಂಗದಂತೆ ಜಾನಕಿಯಮ್ಮನ ಬಾಳಿನಲ್ಲಿ ಅಶಾಂತಿಯ ಚಂಡಮಾರುತವನ್ನೇ ಎಬ್ಬಿಸಿತು.  ಆ ಚಂಡಮಾರುತದ ಹೊಡೆತಕ್ಕೆ ಜಾನಕಿಯಮ್ಮ ತತ್ತರಿಸಿ ಹೋದರು.

ಇಂದಿರಾ ತವರು ಮನೆ ಹಾದಿ ತುಳಿದು ಆರು ತಿಂಗಳು ಕಳೆದರೂ ಮರಳಿ ಬರಲಿಲ್ಲ. ಜಾನಕಿಯಮ್ಮ ಮಗ ವಿಶ್ವನಲ್ಲಿ ವಿಚಾರಿಸಿದರೆ ‘ ನಿನಗ್ಯಾಕೆ ಅಧಿಕ ಪ್ರಸಂಗ..?’ ಎಂದು ಹೆತ್ತಬ್ಬೆಗೆ ಒರಟಾಗಿ ಪ್ರಶ್ನಿಸುತ್ತಿದ್ದ.

ಮಗ ವಿಶ್ವ ಊಟ ಬಿಟ್ಟ. ಮಾತು ಬಿಟ್ಟ. ಕತ್ತಲೆಯಾಗುತ್ತಿದ್ದಂತೆ ಮಾಳಿಗೆ ಕೋಣೆ ಸೇರುತ್ತಿದ್ದ. ನಂದಗೋಕುಲದಂತಹ ಮನೆ ಜಾನಕಿಯಮ್ಮನ ಪಾಲಿಕೆ ಸ್ಮಶಾನವಾಯಿತು.

___________________________

‘ಜಾನಕಿಯಮ್ಮನವರೇ…ಜಾನಕಿಯಮ್ಮನವರೇ…’ ಪಟೇಲರ ಕೂಗಿಗೆ ಜಾನಕಿಯಮ್ಮನವರು ವಾಸ್ತವ ಲೋಕಕ್ಕೆ ಬಂದರು. ಪಕ್ಕದಲ್ಲೇ ಕಿರಿಯ ಮಗ ಪ್ರಸಾದ, ಸೊಸೆ ಕಾಂತಿ ಹಾಗೂ ಮೊಮ್ಮಕ್ಕಳು ನಿಂತಿದ್ದರು. ಎದುರುಗಡೆ ಹಿರಿಯ ಮಗ ವಿಶ್ವನಾಥ ಬಿಗಿದು ಮುಖ ಹೊತ್ತು ನಿಂತಿದ್ದ. ವಿಶ್ವನಾಥನೊಡನೆ ಹಲವು ಸುತ್ತಿನ ಮಾತುಕತೆ ನಡೆಸಿ ವಿಫಲರಾದ ಪಟೇಲರು ಮನೆ ಪಾಲು ಮಾಡುವ ತೀರ್ಮಾನ ಪ್ರಕಟಿಸಿದರು.

‘ ಜಾನಕಿಯಮ್ಮನ ಸಾಕುವವರು ಯಾರು..?’ ಪಟೇಲರು ಪ್ರಶ್ನಿಸಿದರು.

ಸೂರಿನತ್ತ ದೃಷ್ಟಿ ಬೀರಿದ ವಿಶ್ವ ತುಟಿ ಬಿಚ್ಚಲಿಲ್ಲ.

‘ ನಾನೇ ಸಾಕುತ್ತೇನೆ… ಅಮ್ಮ ನನ್ನ ಜತೆ ಇರಲಿ..’ ಕಿರಿಯ ಮಗ ಪ್ರಸಾದ ಹೇಳಿದ.

ಮದುವೆಯಾಗದ ತಂಗಿ ‘ ‘ ‘ವಾರಿಜಾಳ ಜವಾಬ್ದಾರಿ ಯಾರು ನೋಡುತ್ತೀರಿ ..?’ ಪಟೇಲರು ಮತ್ತೆ ಪ್ರಶ್ನಿಸಿದರು.

ಹಿರಿಯ ಮಗ ವಿಶ್ವ ಮತ್ತೆ ಮೌನಕ್ಕೆ ಶರಣಾದ. 

ಕಿರಿಯ ಮಗ ಪ್ರಸಾದ ತಂಗಿಯ ಜವಾಬ್ದಾರಿಯನ್ನೂ ವಹಿಸಿಕೊಂಡ. ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಪ್ರಸಾದ್ ಒಳಗೆ ನಡೆದ. ಅಲ್ಲಿಗೆ ಸುಂದರ ಸಂಸಾರಕ್ಕೆ ಕಲ್ಲು ಬಿತ್ತು.

‘ಅಪ್ಪಾ…ಅಪ್ಪಾ..’ ಮಗಳ ಕೂಗಿಗೆ ನಾನು ವಾಸ್ತವ ಲೋಕಕ್ಕೆ ಬಂದೆ. ಮಂಚದ ಕಂಬ ಹಿಡಿದಿದ್ದ ನನ್ನ ಕೈಗಳಿಗೆ ಧೂಳು ಅಂಟಿಕೊಂಡಿತ್ತು. ಹದಿನೈದು ವರ್ಷಗಳ ಹಿಂದೆ ಅಜ್ಜಿ ಹೇಳಿದ ವಾಸ್ತವವನ್ನು ನೆನೆಸುತ್ತಾ ಪ್ರಪಂಚವನ್ನೇ ನಾನು ಮರೆತಿದ್ದೆ.

‘ ಅಪ್ಪಾ.. ಹೋಗುವಪ್ಪ… ನಮ್ಮ ಮನೆಗೆ ಹೋಗುವ ‘ ಮಗಳು ಅಂಗಿ ತುದಿ ಹಿಡಿದು ಜಗ್ಗಲಾರಂಭಿಸಿದಳು.

ಮಾವ ಮಂಚದ ಮೇಲೆ ಕುಳಿತು ಕಣ್ಣೀರು ಇಳಿಸುತ್ತಿದ್ದರು. ಮಾವನ ಕಣ್ಣಲ್ಲಿ ಮೊದಲ ಬಾರಿಗೆ ನಾನು ಕಣ್ಣೀರು ಕಂಡೆ. ಶಾಲಾ ರಜ ದಿನಗಳಲ್ಲಿ ಅಜ್ಜಿ ಮನೆಗೆ ಬಂದಾಗಲೆಲ್ಲ ವಿಶ್ವ ಮಾವನ ಸಿಡುಕಿನ ಮುಖ ನೋಡಿ ಮಾತ್ರ ನನಗೆ ಗೊತ್ತಿತ್ತು. ಕಣ್ಣೀರು ಎಂದೂ ಕಂಡಿಲ್ಲ. ಮಾವನ ಅಳು ನಂಗೆ ದುಃಖ ತರಲಿಲ್ಲ, ಆದರೆ ನನ್ನಜ್ಜಿ ಜಾನಕಿಯಮ್ಮನಿಗೆ ಆದ ಅನ್ಯಾಯದ ಬಗ್ಗೆ ಕ್ರೋಧ ಉಕ್ಕಿ ಬಂತು. ನನಗೆ ಗೊತ್ತಿಲ್ಲದಂತೆ ಅವುಡುಗಚ್ಚಿದೆ. ನನ್ನ ಮುಖದಲ್ಲಾದ ಬದಲಾವಣೆ ಕಂಡು ಮಗಳು ಅಳಲಾರಂಭಿಸಿದಳು.  ಮಗಳನ್ನು ಹಾಗೆ ಎತ್ತಿ ಹೆಗಲಿಗೆ ಹಾಕಿ ಬಸ್ ಸ್ಟಾಂಡ್ ನತ್ತ ಬಿರಬಿರನೆ ಹೆಜ್ಜೆ ಹಾಕಿದೆ. ಮನಸ್ಸು ಕೇಳಲಿಲ್ಲ, ಮತ್ತೊಮ್ಮೆ ತಿರುಗಿ ನೋಡಿದೆ. ಮಾಳಿಗೆ ಮನೆಯ ಗೋಡೆ ಮೇಲೆ ‘ ಜಾನಕಿ ನಿವಾಸ ‘ ಬರೆದದ್ದು ಕಾಣಿಸಿತು. ಕಣ್ಣುಗಳು ಮಂಜಾದವು. ಅಕ್ಷರಗಳು ಅಸ್ಪಷ್ಟವಾಯಿತು.

‘ ಅಪ್ಪಾ..ಬಸ್ ಬಂತು..’ ಮಗಳು ಹೇಳಿದಳು.

ಮಗಳನ್ನು ಎಡಗೈಗೆ ಬದಲಾಯಿಸಿ ಬಸ್ ಹತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು