ಇತ್ತೀಚಿನ ಸುದ್ದಿ
ಕೊಮಾರ್ಬಿಡ್ ಕಾಯಿಲೆಗಳ ಪತ್ತೆಗೆ 2.61ಲಕ್ಷ ಕುಟುಂಬಗಳ 13 ಲಕ್ಷ ಮಂದಿಯ ಬೃಹತ್ ಸರ್ವೇ
July 27, 2020, 1:30 AM

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಮಾರ್ಬಿಡ್ ಕಾಯಿಲೆಗಳ ಪತ್ತೆಗಾಗಿ ಜಿಲ್ಲೆಯಲ್ಲಿ ಬೃಹತ್ ಸರ್ವೇ ಕಾರ್ಯ ನಡೆಯಲಿದೆ. 35 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 13 ಲಕ್ಷ ಜನರ ಆರೋಗ್ಯ ತಪಾಸಣೆ ನಡೆಯಲಿದೆ.
ಜಿಲ್ಲೆಯ ಸುಮಾರು 2.61 ಲಕ್ಷ ಕುಟುಂಬಗಳ ಕೊಮಾರ್ಬಿಡ್ ಸರ್ವೇಗೆ 876 ತಂಡಗಳನ್ನು ರಚಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ತರಬೇತಿ ಹೊಂದಿದ ಸ್ವಯಂ ಸೇವಕರು ಮನೆ ಮನೆ ಸರ್ವೇ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

ಪ್ರತಿ ತಂಡದಿಂದ 40ಮನೆಗಳ ಸರ್ವೆ
35 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಲಿರುವ ತಂಡ ಅಸ್ತಮಾ, ಉಸಿರಾಟದ ತೊಂದರೆ, ಡಯಾಬಿಟಿಸ್, ಹೃದ್ರೋಗ, ಕಿಡ್ನಿ ಸಮಸ್ಯೆ, ಟಿಬಿ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಸಂಪೂರ್ಣ ಸ್ಕ್ರೀನಿಂಗ್ ಗೆ ಒಳಪಡಿಸಲಿದೆ. ಪ್ರತಿಯೊಂದು ತಂಡ 40 ಮನೆಗಳ ಸರ್ವೇ ಕಾರ್ಯವನ್ನು ನಡೆಸಲಿದೆ. ಮಂಗಳೂರಿನ 13, ಸುಳ್ಯ 2, ಬೆಳ್ತಂಗಡಿ 8, ಬಂಟ್ವಾಳ 6, ಪುತ್ತೂರು 6 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ನಡೆಯಲಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಕ್ಲಸ್ಟರ್ ಗಳಲ್ಲಿ ಕೊಮಾರ್ಬಿಡ್ ಪತ್ತೆಗಾಗಿ ಸರ್ವೇ ಕಾರ್ಯ ನಡೆಯಲಿದೆ. ಮಂಗಳೂರು ನಗರ ಹೊರತುಪಡಿಸಿ ಉಳಿದ ಕಡೆ ವಾರದೊಳಗೆ ಸರ್ವೇ ಕಾರ್ಯ ಮುಗಿಯಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದ್ದಾರೆ.