ಇತ್ತೀಚಿನ ಸುದ್ದಿ
ಕೇರಳ: ಅಂದು ಸರಿತಾ ನಾಯರ್, ಇಂದು ಸ್ವಪ್ನಾ ಸುರೇಶ್ ಬಿರುಗಾಳಿ
July 20, 2020, 3:46 AM

ತಿರುವನಂತಪುರಂ(reporterkarnatakanews):
ಕೇರಳದಲ್ಲಿ ಇದೀಗ ಸ್ವಪ್ನಾ ಸುರೇಶ್ ಅವರದ್ದೆ ಮಾತು. ಕಳೆದ 10 ದಿನಗಳಲ್ಲಿ ಸ್ವಪ್ನಾ ಸುರೇಶ್ ಗೆ ಲಭಿಸಿರುವ ಮಿಡೀಯಾ ಕವರೇಜ್ ರಾಜ್ಯದ ಯಾವುದೇ ವ್ಯಕ್ತಿಗೂ ದೊರೆತಿಲ್ಲ. 30 ಕಿಲೊ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಮೊದಲು ಕೇಳಿ ಬಂದ ಹೆಸರೇ ಸ್ವಪ್ನಾ ಸುರೇಶ್.
ಹುಟ್ಟಿನಿಂದ ಶ್ರೀಮಂತ ಮನೆತನಕ್ಕೆ ಸೇರಿರುವ ಸ್ವಪ್ನಾ ಸುರೇಶ್ ತಮ್ಮ ಕೆಲಸದಿಂದ ಮನೆಗೆ ಕೀರ್ತಿ ತಂದಿಲ್ಲ. ಆದರೆ ಪದವಿ ಪ್ರಮಾಣಪತ್ರದಿಂದ ಹಿಡಿದು ಆಕೆಯ ಬಳಿ ಇರುವ ಎಲ್ಲ ಪ್ರಮಾಣಪತ್ರ ನಕಲಿ ಎಂಬ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಅಂಬೇಡ್ಕರ್ ವಿಶ್ವವಿದ್ಯಾನಿಲಯದಿಂದ ಪಡೆದ ಬಿಕಾಂ ಪದವಿ ಕೂಡ ನಕಲಿ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖೆಗೆ ಆಗ್ರಹ ಕೇಳಿ ಬಂದಿದೆ.

ಕೇರಳ ರಾಜಕೀಯದಲ್ಲಿ ಮಹಿಳೆಯರಿಂದಾಗಿ ಕೋಲಾಹಲ ಸೃಷ್ಟಿಯಾಗುತ್ತಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆ ಯುಡಿಎಫ್ ಸರಕಾರ ಅಸ್ತಿತ್ವದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೋಲಾರ್ ಲ್ಯಾಂಪ್ ಕಂಟಕ ಎದುರಿಸಿದ್ದರು. ಇಲ್ಲಿ ಕೇಳಿ ಬಂದದ್ದು ಸರಿತಾ ನಾಯರ್ ಎಂಬ ಮಹಿಳೆಯ ಹೆಸರು. ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಕೆ. ಸಿ. ವೇಣುಗೋಪಾಲ್ ವಿರುದ್ಧ ಕೂಡ ಆರೋಪ ಕೇಳಿ ಬಂದಿತ್ತು.
ಇದೀಗ ಎಡಪಕ್ಷಗಳ ಸರಕಾರ, ಪಾತ್ರಧಾರಿ ಬದಲು. ಇಂದು ಪಿಣರಾಯಿ ವಿಜಯನ್.. ಸರಿತಾ ನಾಯರ್ ಬದಲಿಗೆ ಸ್ವಪ್ನಾ ಸುರೇಶ್ ರಂಗ ಪ್ರವೇಶ. ಮಹತ್ವಾಂಕ್ಷೆಯ ಮಹಿಳೆ ಸ್ವಪ್ನಾ ಸುರೇಶ್.. ಇದು ಅವರ ನಡೆ ನುಡಿಯಲ್ಲಿ ವ್ಯಕ್ತವಾಗುತ್ತದೆ. ಗುರಿ ತಲುಪಬೇಕು. ಅದು ಕೆಟ್ಟದಾಗಿರಲಿ ಒಳ್ಳೆಯದಾಗಿರಲಿ.. ತನ್ನ ಕೆಲಸವಾಗಬೇಕು ಇದು ಸ್ವಪ್ನಾ ಸುರೇಶ್ ಅಳವಡಿಸಿಕೊಂಡ ಸೂತ್ರ. ಈ ಹಿಂದೆ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಸಹೋದ್ಯೋಗಿಯೊಬ್ಬರ ವಿರುದ್ದ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿದ್ದರು. ಇದು ಅವರ ಕ್ರಿಮಿನಲ್ ಮೈಂಡ್ ಗೆ ಕೈಗನ್ನಡಿ ಹಿಡಿಯುತ್ತಿದೆ.
ರಾಷ್ಟ್ರೀಯ ತನಿಖಾ ಆಯೋಗ ಮತ್ತು ಕಸ್ಟಮ್ಸ್
ಚಿನ್ನ ಕಳ್ಳ ಸಾಗಾಟದ ತನಿಖೆ ಕೈಗೆತ್ತಿಕೊಂಡಿದೆ. ತಿರುವನಂತಪುರಂನಲ್ಲಿ ಟ್ರಿಪಲ್ ಲಾಕ್ ಡೌನ್ ಜಾರಿಯಲ್ಲಿದ್ದರೂ ಸ್ವಪ್ನಾ ಸುರೇಶ್ ಮತ್ತು ತಂಡ ಯಾರ ಕೈಗೂ ಸಿಗದೆ ಬೆಂಗಳೂರು ತಲುಪುವಲ್ಲಿ ಯಶಸ್ವಿಯಾಗಿತ್ತು. ಕಾಸರಗೋಡಿನಿಂದ ಮಂಗಳೂರಿಗೆ ತೆರಳಲು ಸಾಧ್ಯವಾಗದಿರುವಾಗ ಮೂರು ರಾಜ್ಯಗಳಲ್ಲಿ ಯಾರ ಕಣ್ಣಿಗೆ ಕೂಡ ಬೀಳದೆ ಸ್ವಪ್ನಾ ಪ್ರಯಾಣ ಬೆಳೆಸಿದ್ದಳು ಎಂಬುದು ಅವರ ಪ್ರಭಾವದ ಪರಿಚಯ ಮಾಡಿಕೊಡುತ್ತದೆ.
ಸ್ವಪ್ನಾ ಮತ್ತು ತಂಡ ಕನಿಷ್ಟ 200 ಕಿಲೋ ಚಿನ್ನವನ್ನು ಅಕ್ರಮವಾಗಿ ತಂದಿದ್ದಾರೆ ಎಂಬುದು ಇದುವರೆಗಿನ ಲೆಕ್ಕಾಚಾರ. ಸಂಪೂರ್ಣ ತನಿಖೆ ಬಳಿಕ ಸತ್ಯ ಹೊರಬರಲಿದೆ. ಆದರೆ ಇದು ಈಗಾಗಲೇ ಸೃಷ್ಟಿಸಿರುವ ರಾಜಕೀಯ ಕಂಪನಕ್ಕೆ ಕೇರಳದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಹಿರಿಯ ಐಎಎಸ್ ಅಧಿಕಾರಿ ಶಿವಶಂಕರ್ ಅವರ ತಲೆದಂಡವಾಗಿದೆ. ಮುಖ್ಯಮಂತ್ರಿ ಕಚೇರಿ ವಿರುದ್ದ ಪ್ರತಿಪಕ್ಷ ಗಳು ಆರೋಪ ಹೊರಿಸುತ್ತಿವೆ. ಕೇರಳ ರಾಜಕೀಯದಲ್ಲಿ ಬೀಸುತ್ತಿರುವ ಸುಂಟರಗಾಳಿ ಯಾರನ್ನು ಹೊತ್ತುಕೊಂಡು ಹೋಗಲಿದೆ ಎಂಬುದು ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.