ಇತ್ತೀಚಿನ ಸುದ್ದಿ
ಕುಕ್ಕೆ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಗರ ಪಂಚಮಿ ಆಚರಣೆ ಇಲ್ಲ
July 24, 2020, 11:06 AM

ಮಂಗಳೂರು(reporterkarnataka news):
ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಅನಂತ ಪದ್ಮನಾಭ ದೇಗುಲ ಸೇರಿದಂತೆ ಎಲ್ಲ ಶ್ರದ್ಧಾ ಕೇಂದ್ರಗಳಲ್ಲಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆಗೆ ಅವಕಾಶ ನಿರಾಕರಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆ ನಡೆಯುತ್ತಿಲ್ಲ. ಸಾಮಾನ್ಯವಾಗಿ ನಾಗರ ಪಂಚಮಿ ದಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ರಾಜ್ಯದಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಭಾರಿ ಪ್ರಮಾಣದಲ್ಲಿ ಭಕ್ತ ಪ್ರವಾಹ ಹರಿದು ಬರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ದೇವರ ದರ್ಶನ, ವಿವಿಧ ಸೇವೆಗೆ ಅವಕಾಶ ನಿರಾಕರಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ ಸಾಧ್ಯವಾಗಿರುವುದರಿಂದ ಭಕ್ತರ ಪ್ರವೇಶ ನಿರಾಕರಿಸಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಅದೇ ರೀತಿ ಕುಡುಪು ಅನಂತ ಪದ್ಮನಾಭ ದೇವಾಲಯದಲ್ಲಿಯೂ ಭಕ್ತರ ಪ್ರವೇಶ ನಿರಾಕರಿಸಲಾಗಿದೆ. ಇಲ್ಲಿಯೂ ನಾಗ ತಂಬಿಲ, ಪಂಚಾಮೃತ ಸೇವೆ, ಆಶ್ಲೇಷ ಬಲಿ ಮುಂತಾದ ಯಾವುದೇ ಸೇವೆಗೆ ಅವಕಾಶ ಇರುವುದಿಲ್ಲ.