ಇತ್ತೀಚಿನ ಸುದ್ದಿ
ಕಾಸರಗೋಡು: ಕೈ ಕೋಳದ ಜತೆ ಸಮುದ್ರಕ್ಕೆ ಹಾರಿದ ಆರೋಪಿ
July 22, 2020, 4:49 PM

ಕಾಸರಗೋಡು(reporterkarnatakanews): ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಕೈ ಕೋಳದ ಜತೆ ಸಮುದ್ರಕ್ಕೆ ಹಾರಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ಕಸಬಾ ಸಮುದ್ರತೀರದಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ಮಹೇಶ್ ಕೈ ಕೋಳದ ಜತೆ ಸಮುದ್ರಕ್ಕೆ ಹಾರಿದ್ದಾನೆ ಎಂದು ವರದಿಯಾಗಿದೆ.
ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಮಹೇಶ್ ನನ್ನು ಇಂದು ಸ್ಥಳ ಮಹಜರಿಗಾಗಿ ಸಮುದ್ರ ತೀರಕ್ಕೆ ಕರೆ ತರಲಾಗಿತ್ತು. ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಆತ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಎಂದು ಆರೋಪಿಸಲಾಗಿತ್ತು. ಬಳಿಕ ಮೊಬೈಲನ್ನು ಸಮುದ್ರ ತೀರದಲ್ಲಿ ಎಸೆದಿದ್ದ ಎಂದು ಆತ ಹೇಳಿಕೆ ನೀಡಿದ್ದ ಎಂದು ಹೇಳಲಾಗುತ್ತಿದೆ.
ಇಂದು ಈ ಸಂಬಂಧ ಸಮುದ್ರ ತೀರಕ್ಕೆ ಕರೆ ತಂದಾಗ ಪೊಲೀಸರ ಕೈಯಿಂದ ತಪ್ಪಿಸಿ ಆತ ಸಮುದ್ರಕ್ಕೆ ಹಾರಿದ ಎಂದು ಹೇಳಲಾಗಿದೆ. ಸಮುದ್ರದಲ್ಲಿ ಭಾರೀ ಅಲೆಗಳು ಏಳುತ್ತಿದ್ದು, ಇದುವರೆಗೂ ಮಹೇಶ್ ಬಂಧನ ಸಾಧ್ಯವಾಗಿಲ್ಲ.