ಇತ್ತೀಚಿನ ಸುದ್ದಿ
ಕಾರ್ಮಿಕ ಮಹಿಳೆಗೆ ಮಾನಸಿಕ ಕಿರುಕುಳ, ಕೊಲೆಯತ್ನ: ಆರೋಪಿಗೆ 5 ವರ್ಷ ಸಜೆ
August 4, 2020, 2:41 PM

ಮಂಗಳೂರು(reporterkarnataka news): ಕಾರ್ಮಿಕ ಮಹಿಳೆಗೆ ಮಾನಸಿಕ ಕಿರುಕುಳ ಹಾಗೂ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿಗೆ ಐದು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪೆರ್ಮುದೆ ಕಿಟಕಿ ನಿವಾಸಿಯಾದ ಸುನಿಲ್ಕುಮಾರ್ (42) ಶಿಕ್ಷೆಗೊಳಗಾದ ಆರೋಪಿ.
ಶಿಕ್ಷೆಗೊಳಗಾದ ಆರೋಪಿ ಸುನೀಲ್ಕುಮಾರ್ಗೆ ಕುಡಿತದ ಚಟವಿದ್ದು, ನೆರೆಹೊರೆಯವರೊಂದಿಗೆ ಗಲಾಟೆ ಮಾಡುತ್ತಿದ್ದ. ಅದರಂತೆ, ಮಂಗಳೂರು ನಗರದ ಹೊರವಲಯದ ಎಕ್ಕಾರು ಮೂಲದ ತನುಜಾ (45) ಎಂಬ ಮಹಿಳೆಯ ಜತೆಗೂ ಈತ ಪದೇ ಪದೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಮಹಿಳೆಯು ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮೂರು ಬಾರಿ ದೂರು ನೀಡಿದ್ದರು.
ನಂತರ 2019ರ ಫೆಬ್ರವರಿ 28ರಂದು ಸಂಜೆ 5:30ಕ್ಕೆ ತನುಜಾ ಕೂಲಿ ಕೆಲಸದಿಂದ ಮನೆಗೆ ಬರುತ್ತಿದ್ದ ವೇಳೆ ಆರೋಪಿ ತಡೆದು ನಿಲ್ಲಿಸಿದ್ದಾನೆ. ಈ ವೇಳೆ ಮಹಿಳೆಗೆ ಈತ ಜೀವ ಬೆದರಿಕೆ ಹಾಕುವುದಲ್ಲದೆ, ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದ. ಇದು ಮಾತ್ರವಲ್ಲದೆ ಮಹಿಳೆಯ ಬಳಿಯಿದ್ದ ಮೊಬೈಲ್ ಕೂಡ ಸುಲಿಗೆ ಮಾಡಿದ್ದ ಎನ್ನುವ ಆರೋಪ ಈತನ ಮೇಲಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ತಡೆ, ಮಾರಣಾಂತಿಕ ಹಲ್ಲೆ, ಸುಲಿಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.